ಕ್ಲಾರ್ಕಿಯ - 
ಅಂದವಾದ ಹೂಬಿಡುವ ಒಂದು ಏಕವಾರ್ಷಿಕ ಬಗೆಯ ಸಸ್ಯ. ಒನಾಗ್ರೇಸೀ ಕುಟುಂಬಕ್ಕೆ ಸೇರಿದೆ. ಮೂಲಿಕೆಸಸ್ಯವಾದ ಇದು ಸುಮಾರು 1ಳಿ -2' ಎತ್ತರ ಬೆಳೆಯುತ್ತದೆ. ಎಲೆಗಳು ಪರ್ಯಾಯ ಮಾದರಿಯಲ್ಲಿ ಜೋಡಣೆಗೊಂಡಿವೆ. ಹೂಗಳು ಬಲು ಬೆಡಗಿನವು; ಇವುಗಳ ಬಣ್ಣ ನಸುಗೆಂಪು, ಬಿಳಿ, ಕಡುಗೆಂಪು ಹೀಗೆ ವೈವಿಧ್ಯಪೂರ್ಣ, ಪ್ರತಿ ಹೂವಿನಲ್ಲೂ 4 ಪುಷ್ಪಪತ್ರಗಳು, 4 ದಳಗಳು, 8 ಕೇಸರಗಳು ಮತ್ತು ಉಚ್ಚಸ್ಥಾನದ ಅಂಡಾಶಯ ಇವೆ. ಹೂಗಳು ಉದ್ದ ತೊಟ್ಟಿನ ರೆಸೀóಮ್ ಹೂಗೊಂಚಲುಗಳಲ್ಲಿ ಸಮಾವೇಶಗೊಂಡಿರುವುದರಿಂದ ಇಡೀ ಹೂಗೊಂಚಲನ್ನೆ ಕತ್ತರಿಸಿ ಹೂದಾನಿಗಳಲ್ಲಿ ಇಡಲು ಸೊಗಸಾಗಿವೆ. ಕ್ಲಾರ್ಕಿಯವನ್ನು ಸುಲಭವಾಗಿ ವೃದ್ಧಿಸಬಹುದು. ವೃದ್ಧಿ ಬೀಜಗಳ ಮುಖಾಂತರ, ಸಸಿಗಳನ್ನು ಒಟ್ಲುಪಾತಿಯಿಂದ ಬೇರೆಡೆಗೆ ನಾಟಿ ಮಾಡಲು ಬರುವುದಿಲ್ಲವಾದ್ದರಿಂದ ಬೇಕಾದ ಸ್ಥಳಗಳಲ್ಲಿ ನೇರವಾಗಿ ಬೀಜಗಳನ್ನೇ ಬಿತ್ತಿ ಗಿಡ ಬೆಳೆಸಬೇಕು. ಬೀಜಗಳೆಲ್ಲ ಮೊಳೆತು ಸಸಿಗಳು 3" ಎತ್ತರವಾದಾಗ ಗಿಡದಿಂದ ಗಿಡಕ್ಕೆ 6"-8" ಅಂತರವಿರುವಂತೆ ಬಿಟ್ಟು ಹೆಚ್ಚಾದ ಸಸಿಗಳನ್ನು ಕಿತ್ತುಹಾಕಬೇಕು. ಸಸಿಗಳು ಹೆಚ್ಚು ಶೀತವನ್ನು ತಡೆಯುವುದಿಲ್ಲವಾದ್ದರಿಂದ ಮಳೆಯಿಂದ ಮತ್ತು ಚಳಿಯಿಂದ ಇವನ್ನು ರಕ್ಷಿಸಬೇಕು. ಗಿಡಗಳು ಬೆಳೆಯುತ್ತಿರುವಾಗ ಅವುಗಳ ತುದಿಯನ್ನು ಆಗಿಂದಾಗ್ಗೆ ಚಿವುಟಿ ಹಾಕಬೇಕು. ಇದರಿಂದ ಗಿಡಗಳು ಪೊದೆಯಂತೆ ಬೆಳೆದು ಚೆನ್ನಾಗಿ ಕಾಣುತ್ತವೆ. ಆಗಿಂದಾಗ್ಗೆ ಗೊಬ್ಬರವನ್ನೂ ಹಿಂಡಿಗೊಬ್ಬರದ ದ್ರಾವಣವನ್ನೂ ಹಾಕಬೇಕು. ಸುಮಾರು 3-3ಳಿ ತಿಂಗಳ ಅನಂತರ ಗಿಡಗಳು ಹೂ ಬಿಡಲು ಆರಂಭಿಸುತ್ತವೆ.

ಕ್ಲಾರ್ಕಿಯ ಎಲಿಗೆನ್ಸ್, ಪಲ್ಚೆಲ ಮತ್ತು ರಾಂಬಾಯ್ಡಿಯಗಳು ಜನಪ್ರಿಯವಾದ ಪ್ರಭೇದಗಳು.          (ಕೆ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ